ನಯಪಾಲ
ಬಂಗಾಲದ ಪಾಲ ಸಂತತಿಯ ಒಬ್ಬ ದೊರೆ; 11ನೆಯ ಶತಮಾನದ ಪೂರ್ವಾರ್ಧದಲ್ಲಿ ರಾಜ್ಯವಾಳಿದ. ತಂದೆ ಮಹೀಪಾಲ ತೀರಿಕೊಂಡಾಗ (ಸು.1038) ಸಿಂಹಾಸನವನ್ನೇರಿದ. ಮಹೀಪಾಲ ತ್ರಿಪುರಿಯ ಕಳಚುರಿಗಳೊಂದಿಗೆ ಮಗಧದಲ್ಲಿ ಮಾಡುತ್ತಿದ್ದ ಯುದ್ಧಗಳು ಇವನ ಕಾಲದಲ್ಲೂ ಮುಂದುವರಿದವು. ನಯಪಾಲ ವಾರಣಾಸಿಯ ಪ್ರದೇಶವನ್ನು ತನ್ನ ವಶದಲ್ಲಿ ಉಳಿಸಿಕೊಳ್ಳಲು ಕಳಚುರಿ ದೊರೆ ಗಾಂಗೇಯದೇವನ ವಿರುದ್ಧ ಹೋರಾಡಿ ವಿಫಲನಾದ. ಗಾಂಗೇಯದೇವ ಕಾಲವಾದ ಮೇಲೆ ಅವನ ಮಗನಾದ ಕರ್ಣ ನಯಪಾಲನ ವಿರುದ್ಧ ತನ್ನ ಶತ್ರುತ್ವವನ್ನು ಮುಂದುವರಿಸಿದ. ಕರ್ಣನೊಂದಿಗೆ ಮಾಡಿದ ದೀರ್ಘಕಾಲದ ಹೋರಾಟದಲ್ಲಿ ನಯಪಾಲ ಆರಂಭದಲ್ಲಿ ಸೋಲನ್ನು ಅನುಭವಿಸಿದರೂ ತರುವಾಯ ಅವನು ಕಳಚುರಿ ದೊರೆಯನ್ನು ಯಶಸ್ವಿಯಾಗಿ ಸೋಲಿಸಿದ. ಅಲ್ಲದೆ ಪ್ರಸಿದ್ಧ ಬೌದ್ಧ ವಿದ್ವಾಂಸನಾದ ದೀಪಂಕರ ಶ್ರೀಜ್ಞಾನನ ಮಧ್ಯಸ್ಥಿಕೆಯಿಂದ ಇಬ್ಬರಿಗೂ ಶಾಂತಿ ಒಪ್ಪಂದ ಏರ್ಪಟ್ಟಿತು. ಕೋಸಲದ ಸೋಮವಂಶದ ದೊರೆ ಮಹಾಶಿವಗುಪ್ತ ಯಾಯಾತಿ ಎಂಬುವನು ಗೌಡ ಮತ್ತು ರಾಧಾ ದೇಶಗಳ ಮೇಲೆ ಆಕ್ರಮಣ ನಡೆಸಿದನೆಂದೂ ಗೌಡ ದೇಶದ ದೊರೆ ನಯಪಾಲನಿರಬಹುದೆಂದೂ ಹೇಳಲಾಗಿದೆ. ನಯಪಾಲ ಕನಿಷ್ಠಪಕ್ಷ 15 ವರ್ಷ ರಾಜ್ಯವಾಳಿರಬೇಕು. ಇವನ ಮಗ 3ನೆಯ ವಿಗ್ರಹಪಾಲ ಸು.1055ರಲ್ಲಿ ದೊರೆಯಾದ. ನಯಪಾಲ ವಿದ್ಯಾಭಿಮಾನಿಯಾಗಿದ್ದ. ದೀಪಂಕರ ಶ್ರೀಜ್ಞಾನನೇ ಮೊದಲಾದ ವಿದ್ವಾಂಸರಿಗೆ ಇವನು ಉದಾರಾಶ್ರಯ ನೀಡಿದ್ದ. ದೀಪಂಕರ ಶ್ರೀಜ್ಞಾನನನ್ನು ವಿಕ್ರಮಶೀಲ ವಿದ್ಯಾಪೀಠದ ಮುಖ್ಯನನ್ನಾಗಿ ನೇಮಿಸಿದ್ದ. ಪಾಲ ಸಂತತಿಯ ಇತರ ದೊರೆಗಳಂತೆ ನಯಪಾಲನೂ ಬೌದ್ಧಮತದ ನಿಷ್ಠಾವಂತ ಅನುಯಾಯಿಯಾಗಿದ್ದ.						(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ